Posted by: pavankir | ಜೂನ್ 2, 2011

ಭಕ್ತಿಯ ದೀಪವ ಬೆಳಗುತ್ತಾ…..

ಮನುಷ್ಯ ತನ್ನ ಬಯಕೆಗಳನ್ನು ತೀರಿಸಿಕೊಳ್ಳಲು ನಿಸರ್ಗದ ಮೇಲೆ ಹತೋಟಿ ಸಾದಿಸುವ ಪ್ರಯತ್ನ ನೆಡೆಸಿದರೂ ನಿಸರ್ಗ ಮಾತ್ರ ಮನುಷ್ಯನನ್ನು ತನ್ನ ಆಂಕೆಯಲ್ಲಿ ಇನ್ನೂ ಇರಿಸಿಕೊಂಡಿದೆ. ದೇವರ ಅಸ್ತಿತ್ವದ ಪ್ರಶ್ನೆಯನ್ನು ಬದಿಗಿಟ್ಟು, ನಾವು ನಂಬುವ ಅತಿಮಾನುಶ ಶಕ್ತಿಯ ಬಗೆಗೆ ಯೋಚಿಸಿದರೆ, ನಮ್ಮ ಪೂಜಾ ವಿಧಾನಗಳು, ಪ್ರಾರ್ಥಿಸುವ ಮಂತ್ರಘೊಷಗಳು, ಬಳಸುವ ಸಾಮಗ್ರಿಗಳು, ಆರಾಧಿಸುವ ಕಾಲ ಮತ್ತು ಪ್ರದೇಶಗಳಲ್ಲಿ ವೈವಿದ್ಯತೆ ನೆಲೆಸಿದೆ. ನಿಸರ್ಗದ ಜೊತೆ ಗಾಢವಾದ ಸಂಬಂಧ ಹೊಂದಿರುವ ನಮ್ಮ ಸಂಸ್ಕೃತಿ ಎಲ್ಲವನ್ನು ಎಲ್ಲರನ್ನೂ ಪೂಜಿಸುವ, ಪ್ರೀತಿಸುವ ಹಾಗೂ ಗೌರವಿಸುವ ಗುಣವನ್ನು ನಮ್ಮ ನರ ನಾಡಿಗಳಲ್ಲಿ ನೆಲೆಸುವಂತೆ ಮಾಡಿದೆ. ದೇವರನ್ನು ಪೂಜಿಸುವಾಗ ಮಂತ್ರ ಪೂರಿತವಾದ ಶಾಸ್ತ್ರ ಅನುಷ್ಟಾನಾಗಳು ಮುಖ್ಯವೋ ಅಥವಾ ಭಕ್ತಿಯಷ್ಟೇ ಸಾಕೇ ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ನಿದರ್ಶನವನ್ನು ಅವಲೋಕಿಸುವ ಉದ್ದೆಶವೇ ಈ ಲೇಖನ.

ವಿದುರನ ಕುರಿತು ಕೇಳದವರಿಲ್ಲ – ಮಹಾಭಾರತ ಮಹಾಗ್ರಂಥದಲ್ಲಿ ಸ್ಮರಿಸ ಬಹುದಾದ ಒಬ್ಬ ಪುಣ್ಯ ಪುರುಷ ಈ ವಿದುರ. ಧರೆಗವತರಿಸಿದ ಭಗವಂತ ಶ್ರೀ ಕೃಷ್ಣ ದರ್ಮಿಷ್ಟರಾದ ಪಾಂಡವರ ಪರವಾಗಿ ಸಂಧಾನಕ್ಕೆಂದು ಹಸ್ತಿನಾವತಿಗೆ ಬಂದಾಗಿನ ಪ್ರಸಂಗವನ್ನು ಗಮನಿಸಿದರೆ, ಭಕ್ತಿಯ ಪ್ರಧಾನ್ಯತೆಯ ಬಗ್ಗೆ ನಮಗೆ ಅರಿವಾಗುತ್ತದೆ. ಆ ಕಾಲಕ್ಕೆ  ಬಡವನೆನಿಸಿದ್ದ ದಾಸೀ ಪುತ್ರ ವಿದುರ ಅಚ್ಯುತನ ಪರಮ ಭಕ್ತ. ಮಾದವನು ಕರಿಪುರಕ್ಕೆ ಬರುತ್ತಿರುವ ವಾರ್ತೆಯಿಂದಲೇ ಪುಳಕಿತಗೊಂಡ ಧನ್ಯ ಜೀವಿ. ಹಸ್ತಿನಯೆ ರಾಜಬಿದಿಗಳೆಲ್ಲ ಶೃಂಗಾರಗೊಂಡಿದ್ದು, ವಾತಾಯನದ ವ್ಯವಸ್ಥೆ ಇದ್ದ ದುಷ್ಯಾಸನನ ಮನೆಯಲ್ಲಿ ವಾಸುದೇವನ ವಾಸ್ತವ್ಯದ ವ್ಯವಸ್ಥೆಯಾಗಿತ್ತು. ಮುಕುಂದನ ರಾಟದ ಧೂಳಿ ಸೋಂಕಿದರೂ ಸಾಕೆಂಬ ಭಾವ ವಿದುರನಂತರಂಗದಲ್ಲಿ ನೆಲಯಾಗಿತ್ತು. ಭಕ್ತ ವತ್ಸಲನಾದ ಅನಂತ ವೈಭವದ ಮಹಲುಗಳನ್ನು ಬಿಟ್ಟು, ಷಡ್ರಸೋಪೇತಾವಾದ ಬೋಜನವನ್ನುಳಿದು ವಿದುರನ ಮನೆಯಂಗಳಕ್ಕೆ ನೆಡೆದಿದ್ದಾನೆಂಬುದೇ ಭಕ್ತಿಯ ಪಾರಮ್ಯಕ್ಕೆ ಸಿಗುವ ಜ್ವಲ೦ತ ಸಾಕ್ಷಿ.

ಮುಕುಂದನ ರಥವು ತನ್ನ ಮನೆಯಂಗಳದಲ್ಲಿ ಬಂದು ನಿಂತಾಗ ಕನಸಿನಲ್ಲಿ ಕನವರಿಸುವಂತೆ ವಿದುರ ತನ್ನ ಮಡದಿ ಪಾರಸವಿಯ ಸಮೇತ ಹಾರುತ್ತ ಬರುವಂತೆ ಬಂದಿಳಿದವನೇ, ಸವ್ಯವೋ ಅಪಸವ್ಯವೋ ಎಂಬುದನ್ನು ಗಣಿಸದೆ ಶ್ರೀಹರಿಯ ರಥಕ್ಕೊಂದಿಷ್ಟು ಸುತ್ತು ತಿರುಗಿದ. ತನ್ನ ಮನೆಯಂಗಳದಲ್ಲಿ ಚಿನ್ಮಯನನ್ನು ಕಂಡು ಕುಣಿದಾಡಿದ. ತನ್ನ ಮನೆಯಂಗಳದ ಧೂಳನ್ನು ತನ್ನ ಮೈಗೆ ಹಚ್ಚಿಕೊಂಡ. ಕೃಷ್ಣ ಕೃಷ್ಣ ಕೃಷ್ಣ ಎನ್ನುತ್ತಾ ಆನಂದ ಸಾಗರದಲ್ಲಿ ಓಲಾಡಿದ. ತನ್ನ ಇರವನ್ನು ಮರೆತು ನಕ್ಕ, ಸ್ವಲ್ಪ ಅತ್ತ, ನಗೆ-ಅಳು ಮರೆತು ಕುಣಿದ, ಕುಣಿದು ದಣಿದು ಹೊರಳಾಡಿದ. ನಗುತ್ತಾ ರಥದಲ್ಲಿ ನಿಂತ್ತಿದ್ದ ಕೃಷ್ಣ ಮೆಚ್ಚಿದ, ಮೆಚ್ಚಿ ವಿದುರನನ್ನು ಎತ್ತಿ ಅಪ್ಪಿದ. ವಿದುರ ಮನೆಯ ಗುಡಿಯಲ್ಲಿಟ್ಟಿದ ಕುಡುತೆ ಹಾಲನ್ನು ಬೇಡಿ ಕುಡಿದ. ಅದರಲ್ಲೇ ಹಸಿವಡಗಿ, ಕಟವಾಯೊಳು ಹಾಲಿನ ಬಿಂಧುವೊಂದನ್ನು ಕೆಡವಿಸಿ ಹಸ್ತಿನೆಯಲ್ಲಿ ಹಾಲಿನ ಹೊಳೆ ಹರಿಸಿದ. ಹಾಲಿನ ಹೊಳೆ ಕಂಡ ಕರಿಪುರದ ಕೆಲವರು ತುಂಬಿತಾ ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ತುಂಬಿ ತಾ ಎಂದು ಆಜ್ಞಾಪಿಸುತ್ತಿದ್ದರು.

ಭಕ್ತಿ ಪ್ರಿಯ ಭಗವಂತ ಎಂಬ ಮಾತು ನಿಜವಾದದ್ದು ವಿದುರನ ಪ್ರಕರಣದಲ್ಲಿ. ಭಕ್ತಿ – ಆನಂದ ಸಾಗರದಲ್ಲಿ ಓಲಾಡುತ್ತ ಬಡಬಡಿಸಿದ ಮಾತುಗಳೆಲ್ಲವೂ ಮಂತ್ರ ಘೋಷಗಳಾಯ್ತು, ಅವನು ಮಾಡಿದ ಎಲ್ಲ ಅಂಗಿಕ ಕ್ರಿಯ ಚೇಷ್ಟೆಗಳು ಷೋಡಶ ಪೂಜೆಗಳಾಯ್ತು. ಅಲ್ಲಿ ಅವನ ಅಂಗಿಕ ಕ್ರಿಯ ಕರ್ಮಗಳಿಗೆ ಯಾವ ಬೆಲೆಯೂ ಇರಲಿಲ್ಲ, ಬದಲಾಗಿ ಪ್ರಾಶಸ್ತ್ಯ ಸಿಕ್ಕಿದ್ದು ಅವನ ಅಂತರಂಗದಲ್ಲಿ ಉರಿಯುತ್ತಿದ್ದ ಭಕ್ತಿಯ ಜ್ಯೋತಿಗೆ ಮತ್ತು ಅದರ ಕಾಂತಿಗೆ.

ಆಡಂಬರದ ಪೂಜೆಗಳು ಬೇಕಿಲ್ಲ, ಅತಿಶಯದ ಮಡಿವಂತಿಕೆಯ ನಿರೀಕ್ಷೆಯಿಲ್ಲ, ಬೇಕಾಗಿರುವುದು ಕೇವಲ ಭಕ್ತಿ ಮಾತ್ರ. ಈ ಭಕ್ತಿ ಬ್ರಹ್ಮಾಂಡೋದರನ ಹಸಿವನ್ನು ಕುಡುತೆಯೊಂದರ ಹಾಲಿನಲ್ಲಿ ನೀಗಿಸುತ್ತದೆ, ಅದೇ ಕುಡುತೆಯ ಹಾಲಿನ ಬಿಂಧುವೊಂದರಿಂದ ಹಾಲಿನ ಹೊಳೆ ಹರಿಸುತ್ತದೆ. ಭಕ್ತಿಯ ದೀಪ ಹೊತ್ತಿಸಿದರೆ ಅದರಿಂದ ಹೊರ ಹೊಮ್ಮುವ ಕಾಂತಿ ಪ್ರೀತಿ, ತ್ಯಾಗ, ಪ್ರೇಮ, ದಯೆ, ಕರುಣೆಗಳೆಂಬ ಹೆಸರಿನಿಂದ ಗುರ್ತಿಸಿಕೊಳ್ಳುತ್ತದೆ. ನಾವು ನೀವುಗಳೆಲ್ಲ ಈ ಭಕ್ತಿ ಲಹರಿಯಲ್ಲಿ ತೇಲಾಡಲು ಭಕ್ತಿಯ ದೀಪವನ್ನು ಬೆಳಗೋಣವೇ?
ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ….

ತೋಚಿದ್ದ ಗೀಚಿ ರಿಂಗಣಿಸುತ್ತಿದ್ದ ಸ್ವರ ರಿಂಗಣ ಸ್ತಬ್ದವಾಗಿತ್ತು. ಕಾರಣಗಳು ನೂರೆಂಟು ಆದರೂ ಅವೆಲ್ಲ ನೆಪ ಮಾತ್ರ. ಮತ್ತೆ ಮನದ ತುಡಿತ ನೀಗಲು ಬರೆಯಲಾರಂಭಿಸಿದ್ದೇನೆ. ಸ್ವೀಕರಿಸಿ ಆಶೀರ್ವದಿಸಿ

ಇಂದು ಯಾಕೋ ಏನೋ ದೇವರಿಗೆ ದೀಪ ಹಚ್ಚುವಾಗ ಒಂದಷ್ಟು ವಿಚಾರಗಳ ಸಾಲು ಹೊಳೆಯಿತು. ನಿಮ್ಮೊಂದಿಗೆ ಹಂಚಿಕೊಳ್ಳುವ ಇರಾದಯೇ ಈ ಲೇಖನ. ನಾವೆಲ್ಲರೂ ನೋಡುವ ಬೆಂಕಿ ಪೊಟ್ಟಣ ಮತ್ತು ಅದರ ಕಡ್ಡಿಗಳು; ಅದನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಎಂತಹ ವಿಚಾರಗಳು ತಲೆದೋರುತ್ತದೆ. ನಿರ್ದಿಷ್ಟವಾದ ಕಡ್ಡಿಗಳ ಲೆಕ್ಕ ಇಲ್ಲದೇ ಇದ್ದರೂ ಅವುಗಳ ಆಕಾರ ನಮಗೆ ಗ್ರಹ್ಯ. ಕೆಲವು ಸ್ವಲ್ಪ ದೊಡ್ಡದು, ಮತ್ತೆ ಕೆಲವು ತೀರಾ ತೆಳು, ಕೆಲವಕ್ಕೆ ತಲೆ ದೊಡ್ಡ, ಮತ್ತೆ ಕೆಲವಕ್ಕೆ ತುದಿ ಮೊದಲಿಲ್ಲ, ಹೀಗೆಯೇ ಏನೆನೋ ಆಕಾರಗಳು.
ನಾವು ಬೆಂಕಿ ಪೊಟ್ಟಣದಿಂದ ಯಾವುದಾದರೂ ಒಂದು ಕಡ್ಡಿಯನ್ನು ಹೊರ ತೆಗೆದು ಉರಿಸುತ್ತೇವೆ. ಯಾವ ಕಡ್ಡಿಯನ್ನು ಹೊರ ತೆಗೆಯಬೇಕೆಂಬ ನಿರ್ಣಯವಿರುವುದಿಲ್ಲ, ಹಾಗೆಯೇ ಎಷ್ಟು ಕಡ್ಡಿಗಳನ್ನು ಹೊರ ತೆಗೆಯಬೇಕೆಂಬ ನಿರ್ಣಯವೂ ಇರುವುದಿಲ್ಲ. ನಾವು ಬೆಂಕಿ ಕಡ್ಡಿಗಳನ್ನು ಬೇರೆ ಬೇರೆ ಕಾರಣಗಳಿಗೆ ಉಪಯೋಗಿಸುತ್ತೇವೆ. ದೇವರಿಗೆ ಮಂಗಳ ನೀರಾಜನ ಬೆಳಗಲು, ಉದರಾಗ್ನಿ ಶಮನಕ್ಕೆ ಅಡುಗೆ ಮಾಡಲು, ಬೆಳಕಿಗಾಗಿ ದೀಪ ಉರಿಸಲು, ಅಷ್ಟೇ ಯಾಕೆ ಬೀಡಿ ಹಚ್ಚಲು, ಹೀಗೆ ಹತ್ತು ಹಲವಾರು. ಎಲ್ಲ ಕಡ್ಡಿಗಳು ಉರಿದು ಬಸ್ಮವಾಗಲೇ ಬೇಕಾದರೂ, ಯಾವುದು ಯವಾಗ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲಿಲ್ಲ. ಕಡ್ಡಿಗಳನ್ನು ತಯಾರಿಸುವಲ್ಲಿನ ಉದ್ದೇಶ ಒಳ್ಳೆಯದೇ ಆದರೂ, ಕೆಲವು ಕಡ್ಡಿಗಳು ಇನ್ನೊಬ್ಬರ ಮನೆ ಸುಡಬಹುದು, ಮತ್ತೆ ಕೆಲವು ಕೆಲವರ ಹೆಣ ಸುಡಬಹುದು.
ಬೆಂಕಿ ಕಡ್ಡಿಗಳನ್ನು ನಮ್ಮ ಬದುಕೆಂದು ತಿಳಿದು, ಬೆಂಕಿ ಪೊಟ್ಟಣವನ್ನು ನಮ್ಮ ಕುಟುಂಬವೆಂದು ತಿಳಿದರೆ ಅರೆ  ಕ್ಷಣ ಸೋಜಿಗವಾಗುತ್ತದೆ. ಯಾವ ಕಡ್ಡಿ ಯಾವ ಪೊಟ್ಟಣ ಸೇರುತ್ತದೋ ತಿಳಿಯದು. ಕೆಲವರು ಒಳ್ಳೆಯ ಕಾರಣಕ್ಕಾಗಿ ಬಳಕೆಯಾಗುತ್ತೇವೆ. ಮತ್ತೆ ಕೆಲವರು ವಿನಾ ಕಾರಣ ಜೀವನ ಮುಗಿಸುತ್ತೇವೆ. ಎಂದಿಗೆ ನಮ್ಮ ಜೀವನ ಮುಗಿಯುತ್ತದೋ ತಿಳಿದಿರುವುದಿಲ್ಲ. ಒಂದೊಂದು ದಿನ ತಪ್ಪಿದಾಗಲು ನಾವು ಅಮರರೆಂಬ ಭಾವ ಮೊಳೆಯುತ್ತಿರುತ್ತದೆ. ಎಂದಿಗಾದರು ಈ ಕಾಯ ಎರವಿನ ಒಡವೆ ಎಂಬ ಸತ್ಯ ಅರ್ಥ ಆಗುವುದೇ ಇಲ್ಲ. ಪೊಟ್ಟಣದೊಳಗಿನ ಬದುಕೇ ಸರ್ವಸ್ವ ಅದೇ ಪ್ರಪಂಚವೆಂಬ ಭಾವ ಜೀವ ನದಿಯಲ್ಲಿ ಅಡಗಿರುತ್ತದೆ. ಒಳ್ಳೆಯ ಕಾರಣಕ್ಕಾಗಿ ಒಳ್ಳೆಯವರ ಕೈಗೆ ನಮ್ಮ ಕಡ್ಡಿ ಸಿಗುವಂತಾಗಲಿ ಎಂಬ ಪ್ರಾರ್ಥನೆಯೂ ನಮ್ಮ ಮನದಲ್ಲಿ ಮೂಡುವುದಿಲ್ಲ.
ಈ ಕಿರು ಲೇಖನದ ವಿಚಾರ ಧಾರೆಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ..

Older Posts »

ವಿಭಾಗಗಳು